ರುಬಿಡಿಯಮ್
ಆವರ್ತಕೋಷ್ಟಕದ 1ಎ ಗುಂಪಿನ 5ನೆಯ ಆವರ್ತದ ಮೊದಲನೆಯ ಧಾತು.  ಬೆಳ್ಳಿಬಿಳುಪಿನ ಏಕವೇಲೆನ್ಸೀಯ ಕ್ಷಾರೀಯ ಕ್ರಿಯಾಶೀಲ ಮೃದುಲೋಹ. ಪ್ರತೀಕ Rb. ಪರಮಾಣು ಸಂಖ್ಯೆ 37. ಪರಮಾಣು ತೂಕ 85.47. ದ್ರವನಬಿಂದು 38.90 ಸೆ. ಕುದಿಬಿಂದು 6880 ಸೆ. 200ಸೆ ನಲ್ಲಿ ಸಾಪೇಕ್ಷ ಸಾಂದ್ರತೆ 1.53. ಎಲೆಕ್ಟ್ರಾನ್ ವಿನ್ಯಾಸ 1s2 2s2 2p6 3s2 3p6 3d10 4s2 4p6 5s1.

ರಾಬರ್ಟ್ ವಿಲ್‍ಹೆಲ್ಮ್ ಬುನ್ಸೆನ್ (1811-99) ಮತ್ತು ಗುಸ್ಟಾವ್ ರಾಬರ್ಟ್ ಕಿರ್ಖಫ್ (1824-87) ಇವರಿಂದ ರೋಹಿತದರ್ಶಕ ಮುಖೇನ 1861ರಲ್ಲಿ ಆವಿಷ್ಕಾರ. ರೋಹಿತದಲ್ಲಿ ಎರಡು ವಿಶಿಷ್ಟ ಕೆಂಪು ರೇಖೆಗಳಿರುವುದರಿಂದ ಈ ಹೆಸರು. ಧಾತುಲಭ್ಯತೆಯ ಸಮೃದ್ಧಿ ಆಧಾರಿತ ಸರಣಿಯಲ್ಲಿ ಇದರ ಕ್ರಮಾಂಕ 16. ಭೂಚಿಪ್ಪಿನ 0.01%ಷ್ಟಿರುವ ನೈಸರ್ಗಿಕ ರುಬಿಡಿಯಮ್, ಲೆಪಿಡೊಲೈಟ್, ಪೊಲ್ಯುಸೈಟ್, ಮತ್ತು ಕಾರ್ನಲೈಟ್ ಮುಂತಾದ ಖನಿಜಗಳಲ್ಲಿ ವಿಕಿರಣಪಟು ರುಬಿಡಿಯಮ್-87 ಮತ್ತು ರುಬಿಡಿಯಮ್-85 ಎಂಬ  ಎರಡು ಸಮಸ್ಥಾನಿಗಳ ಮಿಶ್ರಣರೂಪದಲ್ಲಿ  ಲಭ್ಯ. ಲೆಪಿಡೊಲೈಟಿನಿಂದ ಲಿತಿಯಮನ್ನು ಆಹರಿಸಿದ ಬಳಿಕ ಉಳಿಯುವ ಕ್ಷಾರಲೋಹೀಯ ಕಾರ್ಬೊನೇಟುಗಳ ಮಿಶ್ರಣದಿಂದ ಅಲ್ಪ ಪ್ರಮಾಣದಲ್ಲಿ ಇದನ್ನು ಪಡೆಯಬಹುದು. 
ಇದು ವಾಯುವಿನಲ್ಲಿ ತನ್ನಷ್ಟಕ್ಕೆತಾನೇ ಜ್ವಲಿಸಬಲ್ಲುದು. ನೀರಿನೊಂದಿಗೆ ತೀಕ್ಷ್ಣವಾಗಿ ವರ್ತಿಸಿ ರುಬಿಡಿಯಮ್ ಹೈಡ್ರಾಕ್ಸೈಡ್ ದ್ರಾವಣ ಮತ್ತು ಹೈಡ್ರೊಜನನ್ನು ಉತ್ಪಾದಿಸುತ್ತದೆ, ಹೈಡ್ರೊಜನ್ ಭಗ್ಗನೆ ಹೊತ್ತಿಕೊಳ್ಳುತ್ತದೆ ಎಂದೇ ಇದನ್ನು ಶುಷ್ಕ ಖನಿಜದೆಣ್ಣೆಯಲ್ಲಿ ಸಂರಕ್ಷಿಸುತ್ತಾರೆ. ರುಬಿಡಿಯಮ್-79ರಿಂದ ರುಬಿಡಿಯಮ್-95ರ ವರೆಗೆ 15 ವಿಕಿರಣಪಟು ಸಮಸ್ಥಾನಿಗಳನ್ನು ಕೃತಕವಾಗಿ ತಯಾರಿಸಲಾಗಿದೆ. 

ದ್ಯುತಿವಿದ್ಯುತ್ಕೋಶಗಳಲ್ಲಿ, ಎಲೆಕ್ಟ್ರಾನ್ ಟ್ಯೂಬುಗಳಲ್ಲಿ ರುಬಿಡಿಯಮ್ ಬಳಕೆ ಇದೆ. ಗಭೀರಾಕಾಶ ಶೋಧಕಗಳ ಪ್ಲಾಸ್ಮ ನೋದನೆಯಲ್ಲಿ ಕಾರ್ಯಾರ್ಥ ಪ್ರವಾಹಿಯಾಗಿ ಬಳಸುವ ಸಾಧ್ಯತೆ ಇದೆ. ವಿಕಿರಣಪಟು ರುಬಿಡಿಯಮ್-87 ಸಮಸ್ಥಾನಿಯನ್ನು ಭೂವೈಜ್ಞಾನಿಕ ವಯಸ್ಸು ನಿರ್ಧರಿಸಲು ಬಳಸಬಹುದು. ಉಲ್ಕಾಪಿಂಡವೊಂದರಲ್ಲಿದ್ದ ರುಬಿಡಿಯಮ್ -87 ಮತ್ತು ಸ್ಟ್ರಾನ್ಶಿಯಮ್-87ಕ್ಕಿರುವ ನಿಷ್ಪತ್ತಿಯನ್ನಾಧರಿಸಿ ಸೌರಮಂಡಲದ ವಯಸ್ಸು 4.6 ಬಿಲಿಯನ್ ವರ್ಷಗಳೆಂದು ಅಂದಾಜಿಸಿದೆ.		
(ಎಚ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ